ಮಲೆನಾಡ ಮಳೆಗಾಲ ಮತ್ತು ಶಾಲಾ ಮಕ್ಕಳು (Malenaada malegaala mattu shaala makkalu)

“ಈ ಮಳಿಗೆ, ಶಾಲಿ ಹುಡ್ಗೂರ್ ಮೇಲೆ ಬಾರಿ ಹೊಟ್ಟೆಕಿಚ್ಚು ಕಂಡ್ರ…ಶಾಲಿ ಬೆಲ್ ಹೊಡಿ ಟೇಮಿಗೆ ಬರ್ರ್ ಅಂತ ಊರ್ ತೊಳ್ಕೋಹೋಗೊ ಹಂಗ್ ಬರುತ್ತೆ…” ಅಂತ ಶಾಲೆ ಪಕ್ಕದ ಅಂಗಡಿ ಗೋಪಾಲಣ್ಣ ಹೇಳ್ತಿದ್ರು.. ಶಾಲೆ ಬೆಲ್ ಆದ್ ತಕ್ಷಣ ಮಳೆನೀರು, ಗೊಚ್ಚೆನ ಪಚ-ಪಚ ಮಾಡ್ತಾ, ಮಳೆ ನೀರು ಕೊಡೆಯಿಂದ ಜಾರಿ ಬ್ಯಾಗ್ ಅರ್ಧ ಒದ್ದೆ ಆಗ್ತಿದ್ರು ಮುಲಾಜಿಲ್ಲದೆ ನಮ್ಮದೇ ಲೋಕದಲ್ಲಿ ಪುರಾಣ ಮಾಡ್ತಾ ಓಡೋ ಮಕ್ಕಳ ನೋಡಿ ಗೋಪಾಲಣ್ಣ ದಿನಾ ಈ ಮಾತು ಹೇಳ್ತಿದ್ರು.
.
.
ನಮಗೆ ಮಾತ್ರ ಶಾಲೆಗೆ ಹೋಗೋವಾಗ ಬೆಳಿಗ್ಗೆ ಸಂಜೆ ಮಳೆ ಸಿಕ್ಕೇ ಸಿಕ್ತಿತ್ತು.ಹೋಗೊ ದಾರಿ ಉದ್ದಕ್ಕೂ ಎಲ್ಲ್ ಎಲ್ಲಿ ಎಷ್ಟು ಹಳ್ಳ ಬಂದಿದೆ ಅಂತ ಸರ್ವೇ ಮಾಡದೇ ನಮಗೆ ದೊಡ್ಡ ವಿಷಯ.’ ಬೋಬೆ ಗೌಡ್ರು ಹಾಳಿ ತಂಕ ಹಳ್ಳ ಬಂದಿತ್ತಂತೆ, ಇನ್ಯರದೋ ಮನೆ ಎಮ್ಮೆ ತೇಲಿ ಹೋತಂತೆ..’ ಇಂತವುಗಳು ನಮಗೆ ರೋಚಕ ಚರ್ಚೆಯ ವಿಷಯವಾಗಿದ್ದವು. ಅರ್ಧ ಒದ್ದೆ ಆಗಿ ಶಾಲೆ ಹಲಗೆ ಮೇಲೆ ಕೂತಾಗ ಒದ್ದೆ ಬಟ್ಟೆ ನೀರು ಪಾದದವರೆಗೂ ಇಳಿದು ಚಳಿಗೆ ಬೆನ್ನುಹುರಿ ನೆಟ್ಟಗಾಗ್ತಿತ್ತು. ನಮ್ಮ ಕಾಲಲ್ಲಿ ಬರೊ ಇಂಬಳದ ಕಾಟ ಬೇರೆ, ಉಸರುವ ರಕ್ತಕ್ಕೆ ಬಸ್ ಟಿಕೇಟ್ ಅಂಟಿಸಿ ಕೂರ್ ತಿದ್ವಿ. .
.
ಧೋ ಎಂದು ಸುರಿವ ಆಶಾಡದ ಮಳೆ-ಗಾಳಿ,
ಕೈಯ ಛತ್ರಿ ಕಮಲದಂತೆ ಅರಳಿ
ಒದ್ದೆಯಾದ ಸಮವಸ್ತ್ರ,ಪುಸ್ತಕ
ಹಲಗೆ ಮೇಲೆ ಕುಳಿತ ಮೈಯಲ್ಲಿ ನಡುಕ
ಗುಡುಗು ಸಿಡಿಲು ಸೋರುವ ಛಾವಡಿ ಮಧ್ಯ
ನಮ್ಮ ಒಕ್ಕೊರಲ ಪದ್ಯ
“ನಾವು ಗೆಳೆಯರು ನಾವು ಎಳೆಯರು
ಹೃದಯ ಹೂವಿನ ಹಂದರ….”
.
ಸುಮಾರಾಗಿ ಎಲ್ಲರದ್ದೂ ಕಪ್ಪು ಕೊಡೆ, ಹಾಗಾಗಿ ಅಮ್ಮ ಕಸೂತಿಯಲ್ಲಿ ಹೆಸರು ಹಾಕಿಕೊಡುತ್ತಿದ್ದರು. ಒಬ್ಬರೊ ಇಬ್ಬರೊ ತರುತ್ತಿದ್ದ ಬಣ್ಣದ ಬಟನ್ ಛತ್ರಿನ ಎಲ್ಲರು ಆಸೆಗಣ್ಣಿಂದ ನೋಡುತ್ತಿದ್ದರು. ಹೀಗೆ ಮಳೆಗಾಲದಲ್ಲಿ ಗದ್ದೆ ಅಂಚಲ್ಲಿ ನಾವು ಹಾಕಿದ ಕೆಸರು ಹೆಜ್ಜೆಗಳು ಎಷ್ಟೇ ಮಳೆಗಾಲ ಕಳೆದರು ಜೀವನದ ಜಾಡಿನಲ್ಲಿ ಹಸಿರಾಗಿವೆ.
…..
ಇಂದು ಬೆಳ್ಳಗೆ ಅಪಾರ್ಟ್ಮೆಂಟ್ ಮುಂದೆ ಶಾಲೆ ವಾಹನ ನಿಂತಿತ್ತು, ಬಕೆಟ್ ನೀರು ಸುರಿದಂತೆ ಬರುವ ಮಂಗಳೂರು ಮಳೆ. ಬಣ್ಣ ಬಣ್ಣದ ಬಟನ್ ಛತ್ರಿಗಳು ಮುದುರಿ ವಾಹನ ಸೇರಿದವು. ಇನ್ನು ಕೆಲವು ಮಕ್ಕಳು ಬಣ್ಣದ ರೈನ್ಕೋಟ್ ಧರಿಸಿ ಮುದ್ದು ಮೂಟೆಗಳಾಗಿ ಧ್ವಿಚಕ್ರ ಏರಿದವು. ಯಾಕೋ ಗೋಪಾಲಣ್ಣನ ಮಾತು ನೆನಪಾಯ್ತು “ಈ ಮಳಿಗೆ, ಶಾಲಿ ಹುಡ್ಗೂರ್ ಮೇಲೆ ಬಾರಿ ಹೊಟ್ಟೆಕಿಚ್ಚು ಕಂಡ್ರ…” .
.
.
Story by: @ashru_poems
PC: @justsimple411

About the author

ashwin

View all posts

1 Comment

Leave a Reply

Your email address will not be published. Required fields are marked *